ಬೆಂಗಳೂರು: ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲೆಗಳಿದ್ದರೆ ಲೋಕಾಯುಕ್ತ ಅಥವಾ ನ್ಯಾ. ಕೆಂಪಣ್ಣ ಆಯೋಗಕ್ಕೆ ದೂರು ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಪ್ರತಿಪಕ್ಷಗಳಿಗೆ ಸವಾಲೆಸೆದಿದ್ದಾರೆ.
ಯಾವುದೇ ದಾಖಲೆಗಳಿಲ್ಲದೆ ರಾಜಕೀಯ ಕಾರಣಕ್ಕೆ ಮುಖ್ಯ ಮಂತ್ರಿ ವಿರುದ್ಧ ಬಿಜೆಪಿ ಹಾಗೂಜೆಡಿಎಸ್ ಆರೋಪಿಸುತ್ತಿವೆ. ರಾಜ್ಯದ ಜನರನ್ನು ಮೂರ್ಖ ರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಪ್ರಮಾದವೆಸಗಿಲ್ಲ, ಕೋರ್ಟ್ ಆದೇಶದ ಪ್ರಕಾರ ಕೆಲಸ ಮಾಡಿದ್ದಾರೆ ಎಂದು ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾಯಕ್ರಮದಲ್ಲಿ ಭಾಗವಹಿಸಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ಸರ್ಕಾರದ ದೈನಂದಿನ ಕಾರ್ಯದಲ್ಲಿ ಪಕ್ಷವು ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಜ.30ರಂದು ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯ ಸಾಧಿಸಲು ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸಭೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.